Monday, March 26, 2007

ಹೊಸ ಯುಗದ ಕಛೇರಿ?

ಕನ್ನಡ ಪ್ರಭ ಓದುಗರಿಗೆ ಯುಗಾದಿಯ ಶುಭಾಶಯಗಳು. ಯುಗ ಯುಗಾದಿ ಕಳೆದರೂ ಹೊಸ ಯುಗಾದಿ ಬರುತಿದೆ. ಹೊಸ ಹರುಷವ, ಹೊಸ ವರುಷವ, ಹೊಸತು, ಹೊಸತು ತರುತಿದೆ, ಎನ್ನುವ ಕವಿಯ ಆಶಯ ಎಲ್ಲರ ಬದುಕಿನಲ್ಲಿ ನಿಜವಾಗಲಿ ಎಂದು ಹಾರೈಸೋಣ. ಮೊನ್ನೆಯಷ್ಟೆ ಕೇಂದ್ರ ಸರಕಾರ ನೌಕರರುಗಳಿಗೆ ತುಟ್ಟಿ ಭತ್ಯೆಯನ್ನೂ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಶಿಕ್ಷಕರುಗಳ ಸೇವಾನಿವೃತ್ತಿಯ ವಯಸ್ಸನ್ನೂ ಹೆಚ್ಚಿಸಿ, ತನ್ನ ಸಿಬ್ಬಂದಿಗೆ ಯುಗಾದಿಯ ಉಡುಗರೆ ಕೊಟ್ಟಿದೆ. ಇತ್ತ ರಾಜ್ಯ ಸರಕಾರವೂ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಐದನೇ ವೇತನ ಆಯೋಗದ ಶಿಫಾರಸಿಗೆ ಸಮ್ಮತಿ ನೀಡಿ, ನೌಕರರುಗಳ ವೇತನದಲ್ಲಿ ಹೆಚ್ಚಳ ಸೂಚಿಸಿದೆ. ಇದೆರಡೂ ಸಾಲದು ಎನ್ನುವ ಹಾಗೆ ಜನಪ್ರಿಯ 'ಪಾಪ್ಯುಲರ್ ಸೈನ್ಸ್' ಪತ್ರಿಕೆ ಇತ್ತೀಚಿನ ಸಂಚಿಕೆಯಲ್ಲಿ ಸಕರ್ಾರಿ ನೌಕರರುಗಳಿಗೆ ಸಿಹಿ ಎನ್ನಿಸುವ ಮತ್ತೊಂದು ಸುದ್ದಿಯನ್ನು ಪ್ರಕಟಿಸಿದೆ. ನಾಳಿನ ದಿನಗಳಲ್ಲಿ ಕಛೇರಿಯಲ್ಲಿ ಬಳಕೆಗೆ ಬರಬಹುದಾದ ಹೈಟೆಕ್ ಸಾಧನಗಳ ಪರಿಚಯವನ್ನು ಅದು ಈ ಸಂಚಿಕೆಯಲ್ಲಿ ಮಾಡಿಕೊಟ್ಟಿದೆ.
ಹೈಟೆಕ್ ಕಛೇರಿಯೇ? ಅಂದರೆ ಇನ್ನಷ್ಟು ಕಂಪ್ಯೂಟರುಗಳ ಖರೀದಿಯೇ? ಕಂಪ್ಯೂಟರೀಕರಣವೇ ಎಂದಿರಾ? ತಾಳಿ. ಕಂಪ್ಯೂಟರೀಕರಣ ಹಳೆಯ ಮಾತು. ಅದಕ್ಕಿಂತಲೂ ಮಿಗಿಲಾದ ಹೈಟೆಕ್ ಸಾಧನಗಳನ್ನು ನಾಳಿನ ಕಛೇರಿಗಳಲ್ಲಿ ಬಳಕೆಗಾಗಿ ಹಲವಾರು ಕಂಪೆನಿಗಳು ಸಿದ್ಧ ಪಡಿಸುತ್ತಿವೆ ಎನ್ನುತ್ತದೆ ಪಾಪ್ಯುಲರ್ ಸೈನ್ಸ್. ಯುಗಗಳು ಬದಲಾಗಬಹುದು. ಆದರೆ ಸಕರ್ಾರಿ ಕಛೇರಿಗಳು ಬದಲಾದಾವೇ ಎಂದು ಕುಹಕ ನುಡಿದಿರಾ? ಆದರೂ ಯುಗಾದಿಯ ಸಂದರ್ಭದಲ್ಲಿ ಹೊಸ ಆಸೆ ಇಟ್ಟುಕೊಳ್ಳುವುದು ತಪ್ಪೇನಲ್ಲವಲ್ಲ!
ಸಕರ್ಾರಿ ಕಛೇರಿಗೆ ಸುತ್ತಿ ಅನುಭವವಿರುವವರಿಗೆ ಬೆಳಗ್ಗೆ ಹತ್ತೂವರೆ ಗಂಟೆಗೆ ಸರಿಯಾಗಿ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರೆ ಅಚ್ಚರಿಯಾದೀತು. ಇದು ಜನಸಾಮಾನ್ಯರ ಅನುಭವ. ಕಛೇರಿಯ ಬಾಸ್ಗಳು ನುಡಿಯುವುದೇ ಬೇರೆ! ತಾವೇನೋ ಸರಿಯಾದ ಸಮಯಕ್ಕೆ ಕಛೇರಿಗೆ ಬರಬಹುದು. ಆದರೆ ಕಛೇರಿಯ ಬೀಗ ತೆರೆದಿರಬೇಕಲ್ಲ. ಕಛೇರಿಯ ಬೀಗ ತೆರೆಯಬೇಕಾದ ಸಿಬ್ಬಂದಿ ತಡವಾಗಿ ಬಂದರೆ ಏನು ಮಾಡುವುದು? ನಿಜ. ಹಿರಿಯ ಅಧಿಕಾರಿಗಳಿಗೂ ಸಮಸ್ಯೆಗಳಿರುತ್ತವೆ. ಅವರ ಪ್ರತಿಷ್ಠೆಗೆ ತಕ್ಕಂತೆ ಕಛೇರಿಯೂ ಇರಬೇಕಲ್ಲವೇ? ಕಛೇರಿಗೆ ಬಂದ ಕೂಡಲೇ ಬೀಗ ಹಾಕಿದ ಬಾಗಿಲು ಎದುರಾದರೆ ಹೇಗಿದ್ದೀತು? ಜೊತೆಗೆ ಕಸ ತುಂಬಿದ ಕಛೇರಿ. ಇವೆಲ್ಲಕ್ಕೂ ಮುಕ್ತಿ ಹಾಡಿದರೆ ಸರಿಯಾದ ಸಮಯಕ್ಕೆ ಸಾರ್ವಜನಿಕರನ್ನು ಭೇಟಿಯಾಗಲು ಅಡ್ಡಯೇನಿದ್ದೀತು ಹೇಳಿ?
ಹಿರಿಯ ಅಧಿಕಾರಿಗಳ ಈ ಸಂಕಟಕ್ಕೆ ಪರಿಹಾರವನ್ನು ಟೆನೆಸೀ ವಿಶ್ವವಿದ್ಯಾನಿಲಯದ ಇಂಜಿನೀಯರುಗಳು ಶೋಧಿಸುತ್ತಿದ್ದಾರೆ ಎನ್ನುತ್ತದೆ ಪಾಪ್ಯುಲರ್ ಸೈನ್ಸ್. ನಾಳಿನ ಈ ಬೀಗ 'ಮುಖ ನೋಡಿ ಮಣೆ' ಹಾಕಲಿದೆ. ಮೊನ್ನೆ, ಮೊನ್ನೆಯಷ್ಟೆ ಬಿಡುಗಡೆಯಾದ ಲೆನೋವೋ ನೋಟ್ಬುಕ್ ಕೂಡ, ಒಡೆಯನ ಮುಖ ನೋಡಿ, ಪತ್ತೆ ಹಿಡಿದು ಅನಂತರವಷ್ಟೆ ಕೆಲಸ ಮಾಡುವುದನ್ನು ಟೀವಿಯ ಜಾಹೀರಾತಿನಲ್ಲಿ ನೋಡಿದ್ದೇವಲ್ಲ. ಈ ಬೀಗವೂ ಅದೇ ಜಾತಿಯ ಸಾಧನ. ಮುಖ, ಮಾತು ಇವುಗಳಿಂದಲೇ ಕಛೇರಿಯ ಒಡೆಯ ಬಂದರು ಎಂದು ಪತ್ತೆ ಹಿಡಿಯುತ್ತದೆ. ಅಷ್ಟೇ ಅಲ್ಲ. ಅಧಿಕಾರಿ ಕಛೇರಿಯೊಳಗೆ ಕಾಲಿಡುವ ಮೊದಲೇ, ಹವಾನಿಯಂತ್ರಕವನ್ನು ಹದವಾದ ತಾಪಮಾನಕ್ಕೆ ಬರುವಂತೆ ಆನ್ ಮಾಡುತ್ತದೆ. ಕಂಪ್ಯೂಟರುಗಳು, ಟೆಲಿಫೋನ್, ದೀಪಗಳು ಇತ್ಯಾದಿ ಅಧಿಕಾರಿಯಷ್ಟೆ ಬಳಸುವ ಸಾಧನಗಳನ್ನೆಲ್ಲ ಸಿದ್ಧಗೊಳ್ಳಲು ಸೂಚನೆ ನೀಡುತ್ತದಂತೆ. ಕಛೇರಿಯ ಸಮಯದಲ್ಲಿ ವೈಯಕ್ತಿಕ ಕೆಲಸಗಳಿಗೆ ಹಾಗೂ ವ್ಯಾಪಾರಕ್ಕೆ ಎಂದು ಹೋಗುವ ಅಧಿಕಾರಿಗಳು ಕಛೇರಿ ಬಿಟ್ಟಕೂಡಲೇ ಇದು ಬಾಗಿಲು ಬಡಿದುಬಿಟ್ಟರೆ ಗುಟ್ಟು ರಟ್ಟಾಗುವುದಿಲ್ಲವೇ? ಎಂದಿರಾ. ಅದಕ್ಕೆ ಈ ಸಾಧನದಲ್ಲಿ ಉಪಾಯವಿದೆಯೋ ಇಲ್ಲವೋ ಗೊತ್ತಿಲ್ಲ.
ಕಛೇರಿಯಲ್ಲಿ ಕೆಲಸ ಸುಗಮವಾಗಿ ಸಾಗಬೇಕಾದರೆ ಇನ್ನೂ ಹಲವಾರು ಅವಶ್ಯಕತೆಗಳಿವೆ. ಇದೀಗ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಿದವರಿಗೆ ಇರುವ ಸವಲತ್ತುಗಳು ಸಕರ್ಾರಿ ನೌಕರರುಗಳಿಗೆ ಮರೀಚಿಕೆ ಎನ್ನಬಹುದು. ಉದಾಹರಣೆಗೆ, ಸದಾ ಕಾಗದದ ಕಡತದ ಮಧ್ಯೆಯೇ ತೂರಿಕೊಂಡವರಿಗೆ ತುಸು ವಿರಾಮ ಬೇಕು ಎನ್ನಿಸುವುದು ಸಹಜ. ಅಥವಾ ರೈಲ್ವೆ ಬುಕಿಂಗ್ ಆಫೀಸಿನಲ್ಲಿ ಕಂಪ್ಯೂಟರ್ ತೆರೆಯನ್ನೇ ನೋಡುತ್ತ ಆರೇಳು ಗಂಟೆ ಕೂರುವ ಯಾರಿಗೂ ಎದುರಿಗಿರುವ ಕ್ಯೂ ಕಂಟಕವೆನ್ನಿಸೀತು. ಇದಕ್ಕೂ ಪಾಪ್ಯುಲರ್ ಸೈನ್ಸ್ ಉಪಾಯ ಹುಡುಕಿದೆ. ಬೇಕೆಂದಾಗ ಕಂಪ್ಯೂಟರ್ ತೆರೆ, ಬೇಡವೆಂದಾಗ ಕನ್ನಡಿ ಅಥವಾ ಕಿಟಕಿಯ ಗಾಜು ಆಗುವಂತಹ ಸ್ಮಾಟರ್್ ಪರದೆಯ ಆವಿಷ್ಕಾರವಾಗಲಿದೆಯಂತೆ.
ಇನ್ನು ಸಕರ್ಾರಿ ಅಧಿಕಾರಿಗಳ ಮೆಚ್ಚಿನ ಕಾರ್ಯಕ್ರಮವಾದ ಮೀಟಿಂಗುಗಳನ್ನು ಸುಗಮಗೊಳಿಸದಿದ್ದರೆ ಆದೀತೇ? ಪಾಲಿಮರ್ ವಿಷನ್ ಎನ್ನುವ ಡಚ್ ಕಂಪೆನಿಯೊಂದು ಇದಕ್ಕೆ ಹುನ್ನಾರು ಹಾಕಿದೆಯಂತೆ. ಈ ಕಂಪೆನಿ ಕಂಕುಳಲ್ಲಿ ಸುತ್ತಿ ಕೊಂಡೊಯ್ಯಬಹುದಾದ ಪೇಪರಿನಂತಹ ಕಂಪ್ಯೂಟರ್ ತೆರೆ ಸೃಷ್ಟಿಸಲಿದೆ. ಮೀಟಿಂಗಿಗೆ ಬೇಕಾದ ಎಲ್ಲ ದಾಖಲೆಗಳನ್ನೂ, ಮಾಹಿತಿಗಳನ್ನೂ ಈ ಇಲೆಕ್ಟ್ರಾನಿಕ್ ಪೇಪರಿಗೆ ಊಡಿಸಿ, ಕಂಕುಳಲ್ಲಿ ಸೇರಿಸಿಕೊಂಡು ಮೀಟಿಂಗಿಗೆ ಹೋಗಬಹುದು. ಸುರುಳಿ ಸುತ್ತಬಹುದಾದ ಪಾಲಿಮರ್ ಆಧಾರದ ಮೇಲೆ ಇಲೆಕ್ಟ್ರಾನಿಕ್ ಸಕರ್ೀಟುಗಳನ್ನು ಜೋಡಿಸಿ, ಬಿಸಿಯಾಗದ, ತಣ್ಣನೆ ಚಿತ್ರಗಳನ್ನು ಪ್ರದಶರ್ಿಸಬಲ್ಲ ಸಾಮಥ್ರ್ಯ ಈ ತೆರೆಗಿದೆ. ಪತ್ರಿಕೆಯಂತೆಯೇ ಇದನ್ನು ಮೇಜಿನ ಮೇಲೆ ಹರಡಿ ಓದಲೂ ಬಹುದು. ಇದಕ್ಕೆ ಪೂರಕವಾಗಿ ನಿಲ್ಲಬಲ್ಲ ಸ್ಮಾಟರ್್ ಫೋನ್ ಒಂದನ್ನು ಅಮೆರಿಕೆಯ ಪಾಲೊ ಆಲ್ಟೊ ಸಂಶೋಧನಾ ಕೇಂದ್ರ ರೂಪಿಸುತ್ತಿದೆ. ಈ ಮೊಬೈಲ್ ಫೋನ್ ನಿಮ್ಮ ಸುತ್ತಮುತ್ತಲಿನ ಸಂಭಾಷಣೆಯನ್ನು ಕೇಳಿ, ಅಥರ್ೈಸಿಕೊಂಡು ಅದಕ್ಕೆ ತಕ್ಕಂತೆ ಮಾಹಿತಿಯನ್ನು ನೀಡಬಲ್ಲುದು. ಉದಾಹರಣೆಗೆ, ಮೀಟಿಂಗಿನಲ್ಲಿ ಸರಿಯಾದ ಮಾಹಿತಿ ನೀವು ನೀಡಿಲ್ಲವಾದ್ದರಿಂದ ನಾಳೆ ಇಷ್ಟು ಹೊತ್ತಿಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚನೆ ಆಯಿತೆನ್ನಿ. ಅದನ್ನು ಕೇಳಿ ಫೋನ್, ತಾನೇ ಮರುದಿನದ ಮೀಟಿಂಗಿನ ಹೊತ್ತಿಗೆ ಸರಿಯಾಗಿ ಅಲಾರಂ ಇಡಬಲ್ಲುದು. ಜೊತೆಗೆ, ನಿಮ್ಮ ಇ-ಪೇಪರಿಗೆ ಯುಕ್ತ ಮಾಹಿತಿಯನ್ನು ಸಂಗ್ರಹಿಸುವಂತೆ ಇಲೆಕ್ಟ್ರಾನಿಕ್ ಆದೇಶವನ್ನೂ ಅದು ನೀಡುವಂತೆ ಮಾಡಬಹುದಂತೆ.
ಆದರೂ ಕಛೇರಿಗಳಲ್ಲಿ ಕ್ಲುಪ್ತ ಸಮಯಕ್ಕೆ ಕೆಲಸ ಆಗುತ್ತದೆಯೇ? ಕಛೇರಿಗಳಿಗೆ ತಿಂಗಳಾನುಗಟ್ಟಲೆ ಸುತ್ತಿದವರ ಅನುಮಾನ ಇದು. 'ನಿಮ್ಮ ದಾಖಲೆಗಳು ಸಿಗಲಿಲ್ಲ. ನಾಳೆ ಬನ್ನಿ. ಹುಡುಕಿ ಇಟ್ಟಿರುತ್ತೇವೆ,' ಎನ್ನುವ ಉತ್ತರವನ್ನು ಯಾರು ತಾನೇ ಕೇಳಿಲ್ಲ. ಮಹಾನಗರ ಪಾಲಿಕೆಯಲ್ಲಿ ಮಗುವಿನ ಜನನ ಸಟರ್ಿಫಿಕೇಟ್, ತಂದೆಯ ಮರಣ ಸಟರ್ಿಫಿಕೇಟ್, ಕಟ್ಟಿದ ಮನೆಯ ಪೂರ್ಣಗೊಂಡ ಬಗ್ಗೆ ಕಂಪ್ಲೀಷನ್ ಸಟರ್ಿಫಿಕೇಟ್, ಜಾತಿ ಪ್ರಮಾಣ ಪತ್ರ ಹೀಗೆ ಹತ್ತು, ಹಲವು ದಾಖಲೆಗಳ ಹಿಂದೆ ಓಡಾಡಿ ಸುಸ್ತಾಗಿದ್ದೀರಾ? ಇನ್ನು ಈ ಉತ್ತರ ದೊರಕದಂತೆ ಮಾಡುವ ಸಾಧನವೊಂದನ್ನು ಸ್ವಿಂಗ್ಲೈನ್ ಎನ್ನುವ ಅಮೆರಿಕನ್ ಕಂಪೆನಿ ತಯಾರಿಸುತ್ತಿದೆ. ಇತ್ತೀಚೆಗೆ ಪಾಂಟಲೂನ್ ದಿರಿಸು ತಯಾರಕರು ಆರ್ಎಫ್ಐಡಿ ಎನ್ನುವ ತಂತ್ರಜ್ಞಾನವನ್ನು ತಮ್ಮ ಉತ್ಪನ್ನಗಳ ಸರಬರಾಜು, ದಾಸ್ತಾನು, ಮತ್ತು ಮಾರಾಟದ ಮಾಹಿತಿಗಳನ್ನು ಆಗ್ಗಿಂದಾಗ್ಗೆ ಪಡೆದುಕೊಳ್ಳಲು ಬಳಸುತ್ತಿದ್ದಾರೆ. ಪುಟ್ಟ ಕಾಡರ್ಿನಲ್ಲಿ ಉತ್ಪನ್ನ ತಯಾರಿಸಿದ ದಿನಾಂಕ, ಬೆಲೆ ಹಾಗೂ ಅದಕ್ಕೇ ಆದ ವಿಶಿಷ್ಟ ಗುರುತನ್ನು ಶೇಖರಿಸಿಡಬಹುದು. ಈ ಮಾಹಿತಿಯನ್ನು ಈ ಕಾಡರ್ು ನಿರಂತರವಾಗಿ ರೇಡಿಯೋ ತರಂಗಗಳ ಮೂಲಕ ಬಿತ್ತರಿಸುತ್ತಿರುತ್ತದೆ. ದೂರದಿಂದಲೇ ಅದನ್ನು ಗುರುತಿಸಬಹುದು. ಉದಾಹರಣೆಗೆ, ಉತ್ಪನ್ನವನ್ನು ದಾಸ್ತಾನುಮಳಿಗೆಯಿಂದ ಹೊರಗೆ ಸಾಗಿಸುವಾಗ, ಅದನ್ನು ಬಾಗಿಲಿಗೆ ಹೊಂದಿಸಿದ ಸಾಧನ ಗುರುತಿಸಿ, ದಾಖಲಿಸುತ್ತದೆ. ಇದೇ ರೀತಿಯಲ್ಲಿಯೇ ಪೇಪರುಗಳನ್ನು ಜೋಡಿಸುವ ಸ್ಟೇಪ್ಲರ್ನಲ್ಲಿಯೇ ಆರ್ಎಫ್ಐಡಿ ತಂತ್ರಜ್ಞಾನವನ್ನು ಹುದುಗಿಸುವ ಯೋಚನೆಯನ್ನು ಸ್ವಿಂಗ್ಲೈನ್ ಮಾಡುತ್ತಿದೆ. ಇದು ಸಾಧ್ಯವಾದಲ್ಲಿ ಪ್ರತಿಯೊಂದು ದಾಖಲೆಯೂ ತನ್ನ ಇರವನ್ನು ನಿರಂತರ ಬಿತ್ತರಿಸುತ್ತಿರುತ್ತದೆ. ಹೀಗಾಗಿ ದಾಖಲೆ ಕಳೆದು ಹೋಗಿದೆ ಎಂದು ಹೇಳುವುದು ಸಾಧ್ಯವಿಲ್ಲ. ಹುಡುಕುವುದೂ ಸುಲಭ. ಜೊತೆಗೆ ಅದನ್ನು ಕದ್ದೊಯ್ಯುವುದೂ ಕಷ್ಟ ಎನ್ನುತ್ತದೆ ಪಾಪ್ಯುಲರ್ ಸೈನ್ಸ್.
ಇಷ್ಟೆಲ್ಲ ಆರಾಮ ಸಾಧನಗಳು ದೊರಕಿದ ಮೇಲೆ ಅಧಿಕಾರಿಗಳಿಗೆ ಇನ್ನೇನು ತಾನೆ ಕೆಲಸ. ಆರಾಮವಾಗಿ ಇದ್ದು ಬಿಡುತ್ತಾರೆ ಎಂದಿರಾ? ಆರಾಮ ಎಲ್ಲಿ ಬಂತು. ಕೆಲಸವಿಲ್ಲದೆ ಕುಚರ್ಿಯ ಮೇಲೆ ಕುಳಿತಿದ್ದರೆ ಬೆನ್ನು ನೋವು ಬರುವುದು ಖಂಡಿತ ಎನ್ನುವ ಉತ್ತರ ಕೇಳುವಿರಿ. ಇದಕ್ಕೂ ಪರಿಹಾರವಿದೆ. ಅಮೆರಿಕೆಯ ಹ್ಯೂಮನ್ಸ್ಕೇಲ್ ಎನ್ನುವ ಕಂಪೆನಿ ತನ್ನಂತಾನೇ 'ಅಡ್ಜಸ್ಟ್' ಮಾಡಿಕೊಳ್ಳಬಲ್ಲ ಕುಚರ್ಿಯೊಂದನ್ನು ಆವಿಷ್ಕರಿಸಿದೆ. ಇದರಲ್ಲಿ ಕೂತು ನೀವು ಎತ್ತ ಜರುಗಿದರೂ ಅದಕ್ಕೆ ತಕ್ಕಂತೆ ಕುಚರ್ಿ ತನ್ನ ಎತ್ತರ, ಬಾಗುವಿಕೆ ಇತ್ಯಾದಿಗಳೆಲ್ಲವನ್ನೂ ತಾನೇ ಬದಲಿಸಿಕೊಳ್ಳುತ್ತದೆ. ನಿಮಗೆ ಆರಾಮ ನೀಡುತ್ತದೆ. ಕಛೇರಿ ಸ್ವರ್ಗವಾಗಲು ಇನ್ನೇನು ಬೇಕು ಎಂದಿರಾ?

(ವಿ.ಸೂ. ಈ ಲೇಖಕರೂ ಒಬ್ಬ ಸಕರ್ಾರಿ ನೌಕರರೇ!)

೨೧.೩.೨೦೦೭