Tuesday, June 24, 2008

ಜೀವ ಭೂಮಿಯಲ್ಲಿಯೇ ಹುಟ್ಟಿತೇ?

ಜೀವ ಭೂಮಿಯಲ್ಲಿಯೇ ಹುಟ್ಟಿತೇ? ಅನ್ಯಲೋಕದಿಂದ ಜೀವದ ಬೀಜ ಬಂದು ಭೂಮಿಯಲ್ಲಿ ಬಿತ್ತನೆಯಾಯಿತೇ? ಈ ಪ್ರಶ್ನೆಗಳು ಇಂದಿಗೂ ಪ್ರಶ್ನೆಗಳಾಗಿಯೇ ಉಳಿದಿವೆ ಎನ್ನುವುದಕ್ಕೆ ಅರ್ತ್‌ ಅಂಡ್‌ ಪ್ಲಾನೆಟರಿ ಸೈನ್ಸ್‌ ಲೆಟರ್‍ಸ್‌ ಪತ್ರಿಕೆಯ ೧೫.೬.೨೦೦೮ ಸಂಚಿಕೆಯಲ್ಲಿ ಪ್ರಕಟವಾದ ಈ ಸಂಶೋಧನಾ ಪ್ರಬಂಧ ಸಾಕ್ಷಿ. ಲಂಡನ್ನಿನ ಇಂಪೀರಿಯಲ್‌ ಕಾಲೇಜಿನ ಝೀಟ ಮಾರ್ಟಿನ್ಸ್‌ ಮತ್ತು ಸಂಗಡಿಗರ ಈ ಶೋಧದ ಪ್ರಕಾರ ಸುಮಾರು ೩೫೦ರಿಂದ ೪೫೦ ಕೋಟಿ ವರ್ಷಗಳ ಹಿಂದೆ ಭೂಮಿಗೆ ಬಂದು ಬಿದ್ದ ಉಲ್ಕಾಶಿಲೆಯಲ್ಲಿ ಜೀವಸ್ವರೂಪಿ ಎನ್ನಲಾದ ಡಿಎನ್‌ಎ ಉತ್ಪಾದನೆಗೆ ಬೇಕಾದ ಕಚ್ಚಾ ರಾಸಾಯನಿಕಗಳು ಇದ್ದ ಕುರುಹುಗಳು ದೊರೆತಿವೆ. ಈ ಕಚ್ಚಾ ರಾಸಾಯನಿಕಗಳು ಭೂಮಿಗೆ ಬಿದ್ದ ಮೇಲೆ ಉಲ್ಕಾಶಿಲೆಯನ್ನು ಸೋಂಕಿದವುಗಳಲ್ಲ ಎಂದು ಮಾರ್ಟಿನ್ಸ್‌ ಅಭಿಪ್ರಾಯ ಪಟ್ಟಿದ್ದಾರೆ. ಆ ಬಗ್ಗೆ ಕನ್ನಡಪ್ರಭದಲ್ಲಿನ ವರದಿ ಇಲ್ಲಿದೆ.

Tuesday, June 17, 2008

"ಅನ್ಯಗ್ರಹಜೀವಿಗಳೇ! ಚಿಪ್ಸ್‌ ಬೇಕೆ, ಚಿಪ್ಸ್‌!"

ಭೂಮಿಯ ಮೇಲೆ ಜಾಹೀರಾತುಗಳ ಭರಾಟೆ ಸಾಲಲಿಲ್ಲವೇನೋ? ಈಗ ಅಂತರಿಕ್ಷದಲ್ಲಿಯೂ ಜಾಹೀರಾತು ಬಿತ್ತರಿಸಿ, ನಕ್ಷತ್ರವಾಸಿಗಳ ಜೊತೆಗೆ (ಅವರು ಇದ್ದರೆ)ವ್ಯಾಪಾರಕ್ಕೆ ಮಾನವ ಅಣಿಯಾಗಿದ್ದಾನೆ. ಮೊನ್ನೆ ಯುರೋಪಿನ ಐಸ್ಕಾಟ್‌ ವ್ಯವಸ್ಥೆಯ ರೇಡಾರಿನಿಂದ ಇಂಗ್ಲೆಂಡಿನ ಕಂಪೆನಿಯೊಂದರ ಚಿಪ್ಸ್‌ ಉತ್ಪನ್ನಗಳನ್ನು ಕುರಿತ ಅರ್ಧ ನಿಮಿಷದ ಜಾಹೀರಾತೊಂದು ದೂರದ ನಕ್ಷತ್ರಲೋಕಕ್ಕೆ ರವಾನೆಯಾಗಿದೆ. ಅಲ್ಲಿನ ವಾಸಿಗಳು ಇದನ್ನು ಮೂಸಿಯೂ ನೋಡುತ್ತಾರೋ ಇಲ್ಲವೋ.. ಒಟ್ಟಾರೆ ತಂತ್ರಜ್ಞಾನದ ಸಾಧ್ಯತೆಗಳ ವಿಶ್ವರೂಪ ಇಲ್ಲಿದೆ. ಈ ಬಗ್ಗೆ ಕನ್ನಡಪ್ರಭ ೧೮.೬.೨೦೦೮ರ ಸಂಚಿಕೆಯಲ್ಲಿ ಒಂದು ವರದಿ. ನಕ್ಷತ್ರಯಾತ್ರೆ ಮಾಡಿದ ಜಾಹೀರಾತು ಇಲ್ಲಿದೆ.

Tuesday, June 10, 2008

ಮಂಗಳನಲ್ಲಿ ಜೀವಜಲವಿಲ್ಲ!

ಮಂಗಳನಲ್ಲಿ ಜೀವವಿದೆ ಎನ್ನುವ ಕುತೂಹಲಕ್ಕೆ ಆಗಾಗ್ಗೆ ಗರಿಗೆದರುತ್ತಲೇ ಇರುತ್ತದೆ. ಮಂಗಳನಲ್ಲಿ ಹಿಂದೊಮ್ಮೆ ಜೀವವಿದ್ದು ಕಮರಿ ಹೋಯಿತೇ? ಜೀವವಿದೆಯೇ? ಅನ್ಯ ಸ್ವರೂಪದ ಜೀವವಿರುವ ಸಾಧ್ಯತೆ ಇದೆಯೇ? ಇತ್ಯಾದಿ ಸಂದೇಹಗಳಿವೆ. ಇವುಗಳನ್ನು ಕುರಿತ ಒಂದು ಲೇಖನ. ಮಂಗಳನಲ್ಲಿ ಜೀವ ಹುಟ್ಟಲು ಅವಶ್ಯಕವಾದ ಗುಣವಿರುವ ನೀರು ಲಭ್ಯವಿರಲಿಲ್ಲ. ಈಗಲೂ ಇಲ್ಲ ಎನ್ನುವ ತರ್ಕ ಇಲ್ಲಿದೆ (ಕನ್ನಡಪ್ರಭ, ೧೧.೬.೨೦೦೮,ಸಂಪಾದಕೀಯ ಪುಟ).